ನಮ್ಮ ಕುರಿತು

ಸಮಾಜ ಮತ್ತು ವೃತ್ತಿ ನಿಷ್ಠೆ ಯಾವುದೇ ಒಂದು ಸುದ್ದಿ ಮಾಧ್ಯಮದ ಪ್ರಾಥಮಿಕ ಕರ್ತವ್ಯ. ಈ ನೆಲೆಯಲ್ಲೇ ಜನಪರ ಆಶಯಗಳಿಗೆ ಸ್ಪಂದಿಸುವ ಒಂದು ಸುದ್ದಿ ಮಾಧ್ಯಮ ದುರ್ಬಲರ ಪಕ್ಷಪಾತಿಯಾಗಿರುತ್ತದೆ. ಓದುಗರಿಂದ ಯಾವುದೇ ಪ್ರಮುಖ ಸುದ್ದಿಯನ್ನು ಮರೆಮಾಚದೇ ಸತ್ಯದರ್ಶನ ಮಾಡಿಸುವುದೂ ಅದರ ಜವಾಬ್ದಾರಿ. ಯಾವುದೇ ಸುದ್ದಿಯನ್ನು ಅತಿಯಾಗಿ ವೈಭವೀಕರಿಸದೇ ರೋಚಕಗೊಳಿಸದೇ ಯಥಾವತ್ತಾಗಿ ಮಂಡಿಸುವುದಷ್ಟೇ ಸುದ್ದಿ ಮನೆಯ ನಿಜವಾದ ಆಶಯ. ಸಮೂಹಸನ್ನಿಗೆ ಒಳಗಾಗದೇ ಯಾವುದೇ ಅಬ್ಬರವಿಲ್ಲದೇ ಓದುಗರನ್ನು ನಿಜದ ಹಾದಿಯಲ್ಲಿ ಮುನ್ನಡೆಸುವ ದಾರಿದೀಪವೂ ಆಗಬೇಕು. ಒಣ ಸಿದ್ಧಾಂತಗಳಿಗಿಂತ ಮಾನವೀಯ ಮೌಲ್ಯಗಳಿಗೆ ಬದ್ಧವಾಗಿರುವುದು ಯಾವುದೇ ಸುದ್ದಿ ಮನೆಯ ಅಡಿಪಾಯವಾಗಬೇಕು. ಹೀಗಾಗಿಯೇ ಯಾವುದೇ ಚೌಕಟ್ಟಿಗೆ ಒಳಗಾಗದೇ ಸ್ವತಂತ್ರ ನಿಲುವನ್ನು ಹೊಂದಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ‘ನಿಮ್ಮ ‘ದಿ ಡೆಕ್ಕನ್ ನ್ಯೂಸ್ ಅಡಿ ಇರಿಸುತ್ತಿದೆ. ಆತ್ಮವಂಚನೆ ಇಲ್ಲದೇ ನಿಜದರ್ಶನದ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವ ಉತ್ಸಾಹಿ ಯುವ  ಮತ್ತು ಅನುಭವೀ ಪತ್ರಕರ್ತರ ಪ್ರತಿಭಾವಂತ ತಂಡ ನಮ್ಮೊಂದಿಗಿದೆ. ವಿವಿಧ ಘಟ್ಟಗಳನ್ನು ದಾಟಿ ಒಂದು ವ್ಯಕ್ತಿತ್ವ ರೂಪಿಸಿಕೊಳ್ಳುವ ಈ ಪ್ರಕ್ರಿಯೆಯ ಬಂಡಿಯಲ್ಲಿ ಓದುಗರೇ ಇಂಧನ. ನಾವು ಚಾಲಕರಷ್ಟೇ. ಸಾಮರಸ್ಯ, ಸಮನ್ವಯತೆಯ ಸಮಾಜದತ್ತ ನಮ್ಮ ನಡಿಗೆ.  ಅದೇ ನಮ್ಮ ಗುರಿ.  ನಿಮ್ಮೊಂದಿಗಿರಲು ನಮ್ಮೊಂದಿಗಿರಿ. .